Yogachetana Life
Lifestyle

23 Aug 2026

ಜೊತೆಯಲ್ಲಿ ನಂಬಿಕೆಯೂ ಇರಬೇಕು

ಭಕ್ತಿ ಮತ್ತು ಶ್ರದ್ಧೆ ಮಾತ್ರ ಸಾಕಾಗುವುದಿಲ್ಲ; ಮನಸ್ಸಿನಲ್ಲಿ ನಂಬಿಕೆಯೂ ಇರಬೇಕು. ಒಬ್ಬ ಹರಿಭಕ್ತ ಮತ್ತು ಕಳ್ಳನ ಕಥೆಯ ಮೂಲಕ ಶ್ರೀಹರಿ ನೀಡಿದ ಸುಂದರ ಸಂದೇಶ.

By Prashant BN

ಜೊತೆಯಲ್ಲಿ ನಂಬಿಕೆಯೂ ಇರಬೇಕು

ಜೊತೆಯಲ್ಲಿ ನಂಬಿಕೆಯೂ ಇರಬೇಕು

ಒಂದೂರಲ್ಲಿ ಮಹಾ ಹರಿಭಕ್ತನೊಬ್ಬನಿದ್ದ. ಅವನೆಷ್ಟು ಹರಿಭಕ್ತನೆಂದರೆ, ಅವನ ದೇಹವನ್ನು ಸೀಳಿದರೆ ರಕ್ತದ ಬದಲು ಹರಿನಾಮವೇ ಹರಿಯುವುದೇನೋ ಅನ್ನುವಷ್ಟರ ಮಟ್ಟಿಗೆ ಆತನಲ್ಲಿ ಹರಿ ಭಕ್ತಿ ಇತ್ತು.

ನಿಂತರೂ, ಕೂತರೂ ಹರಿನಾಮವನ್ನು ಬಿಟ್ಟು ಅವನ ಬಾಯಲ್ಲಿ ಮತ್ತೇನೂ ಬರುತ್ತಿರಲಿಲ್ಲ.

ಒಮ್ಮೆ ಅದೇ ಊರಿನ ಮುಖಂಡನೊಬ್ಬನಿಗೆ, "ಊರಿನಲ್ಲಿ ಭಾಗವತ ಸಪ್ತಾಹ ಮಾಡಿಸಿದರೆ ಊರಿಗೆ ಒಳ್ಳೆಯದಾಗುತ್ತದೆ" ಎಂದು ಯಾರೋ ಸಲಹೆ ನೀಡಿದರು.

ಯಾರನ್ನು ಕರೆಸುವುದೆಂದು ಯೋಚಿಸಿದಾಗ, "ನಮ್ಮ ಊರಲ್ಲೇ ಇರುವ ಈ ಹರಿಭಕ್ತನಿಗಿಂತ ಇನ್ಯಾರು ಬೇಕು?" ಎಂದುಕೊಂಡು, ಆ ಹರಿಭಕ್ತನಿಗೇ ಸಪ್ತಾಹ ನಡೆಸಿಕೊಡುವಂತೆ ಕೇಳಿದರು.

ಅವನು ಅದಕ್ಕೆ ಒಪ್ಪಿಕೊಂಡು ಸಪ್ತಾಹವನ್ನು ಪ್ರಾರಂಭಿಸಿದ.

ಕಳ್ಳನ ಮನಸ್ಸಿನಲ್ಲಿ ಮೂಡಿದ ಆಸೆ

ಸಪ್ತಾಹ ಶುರುವಾಗಿ ಮೂರು ದಿನ ಕಳೆದವು.

ನಾಲ್ಕನೇ ದಿನ ಹರಿದಾಸರು ಕೃಷ್ಣ ಮತ್ತು ಬಲರಾಮರ ಬಾಲ್ಯವನ್ನು ವಿವರಿಸುತ್ತಾ, ಅವರ ಸೌಂದರ್ಯ, ಅವರು ಧರಿಸುತ್ತಿದ್ದ ಬಟ್ಟೆ-ಬರೆಗಳು, ಒಡವೆಗಳು, ವಜ್ರದ ಕಿರೀಟ, ಚಿನ್ನದ ಹಾಗೂ ಮುತ್ತಿನ ಹಾರಗಳು, ಕಾಲ್ಗಡಗಗಳ ಬಗ್ಗೆ ಸುಂದರವಾಗಿ ವರ್ಣಿಸುತ್ತಿದ್ದರು.

ಅದೇ ಸಮಯದಲ್ಲಿ ಸಾಹುಕಾರನ ಮನೆಯಲ್ಲಿ ಕಳ್ಳತನ ಮಾಡಲು ಬಂದಿದ್ದ ಒಬ್ಬ ಕಳ್ಳನ ಕಿವಿಗೆ ಈ ಮಾತುಗಳು ಬಿದ್ದವು.

ಹರಿದಾಸರು ಹೇಳಿದ ಮಕ್ಕಳ ಒಡವೆಗಳ ವರ್ಣನೆ ಅವನ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತಿತು.

ಅವನು ಮನಸ್ಸಿನಲ್ಲಿ,

"ನಾನು ಹೀಗೆ ಸಣ್ಣಪುಟ್ಟ ಕಳ್ಳತನ ಮಾಡುವುದಕ್ಕಿಂತ, ಈ ಹರಿದಾಸರು ಹೇಳುತ್ತಿರುವ ಹುಡುಗರ ಒಡವೆಗಳನ್ನು ಒಮ್ಮೆ ಕದ್ದರೆ ಜೀವನಪರ್ಯಂತ ಸುಖವಾಗಿರಬಹುದಲ್ಲಾ!"

ಎಂದು ಯೋಚಿಸಿದ.

ಏನಾದರೂ ಮಾಡಿ ಆ ಹರಿದಾಸರಿಂದ ಆ ಹುಡುಗರು ಎಲ್ಲಿ ಸಿಗುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ನಿರ್ಧರಿಸಿದ.

ಹರಿದಾಸರು ಹರಿಕಥೆ ಮುಗಿಸಿ ಕೈಯಲ್ಲಿ ಪುಳಿಯೋಗರೆ ಪ್ರಸಾದವನ್ನು ಹಿಡಿದು ಮನೆ ಕಡೆ ಹೊರಟರು.

ಇದನ್ನೇ ಕಾಯುತ್ತಿದ್ದ ಕಳ್ಳ ಅವರನ್ನು ಹಿಂಬಾಲಿಸಿ, ದಾರಿಯಲ್ಲಿ ಅಡ್ಡಗಟ್ಟಿ ಕೇಳಿದ:

"ಸ್ವಾಮಿಗಳೇ, ಇವತ್ತು ನೀವು ಇಬ್ಬರು ಚೆಂದದ ಮಕ್ಕಳ ಬಗ್ಗೆ ಹೇಳಿದಿರಲ್ಲಾ. ಅವರು ಎಲ್ಲಿ ಇರುತ್ತಾರೆ? ಸ್ವಲ್ಪ ತಿಳಿಸಿ."

ಹರಿದಾಸರು ನಕ್ಕು,

"ಎಲೆ ಮೂರ್ಖ, ಅದು ಬರೀ ಕಥೆ ಕಣೋ! ನಾನೇ ನಲವತ್ತು ವರ್ಷದಿಂದ ಕಾಯುತ್ತಿದ್ದೇನೆ. ನನಗೇ ಅವರು ಇನ್ನೂ ಕಂಡಿಲ್ಲ. ನಿನಗೆ ಸಿಗುತ್ತಾರಾ? ತುಂಬಾ ರಾತ್ರಿಯಾಗಿದೆ. ಸುಮ್ಮನೆ ಮನೆಗೆ ನಡಿ."

ಆದರೆ ಕಳ್ಳ ಕೇಳಲಿಲ್ಲ.

"ನೀವು ಹೇಳಲಿಲ್ಲ ಅಂದ್ರೆ, ನಿಮಗೆ ಈಗಲೇ ಇಲ್ಲೇ ಚೂರಿ ಹಾಕಿಬಿಡುತ್ತೇನೆ. ಮೊದಲೇ ನಾನು ಕಳ್ಳ. ನನ್ನ ಹತ್ತಿರ ಈ ಥರ ಆಟವೆಲ್ಲ ನಡೆಯೋಲ್ಲ," ಎಂದು ಬೆದರಿಸಿದ.

ಹರಿದಾಸರಿಗೆ ಭಯವಾಗತೊಡಗಿತು.

ಬೇರೆ ದಾರಿ ಕಾಣದೆ, ಎದುರಲ್ಲಿದ್ದ ಒಂದು ತುಳಸಿ ವೃಂದಾವನವನ್ನು ತೋರಿಸಿ,

"ಇಲ್ಲಿ ಇರ್ತಾರೆ. ಈಗ ಇರಲ್ಲ. ಬೆಳಗಿನ ಜಾವದ ಹೊತ್ತಿಗೆ ಬರ್ತಾರೆ. ಈಗ ಮನೆಗೆ ಹೋಗು. ಬೆಳಗಿನ ಜಾವದ ಹೊತ್ತಿಗೆ ಬಾ," ಎಂದು ಹೇಳಿ ಅಲ್ಲಿಂದ ಹೊರಟರು.

ಕಳ್ಳನ ನಂಬಿಕೆ

ಕಳ್ಳನಿಗೆ ಒಂದು ಯೋಚನೆ ಬಂತು.

ಈಗ ಮನೆಗೆ ಹೋಗಿ ಮಲಗಿದರೆ ಬೆಳಗಿನ ಜಾವ ಎಚ್ಚರವಾಗದೇ ಇರಬಹುದು. ಹಾಗಾಗಿ ಅಲ್ಲಿಯೇ ಇದ್ದ ಒಂದು ಮರದ ಮೇಲೆ ಕುಳಿತು ರಾತ್ರಿ ಕಳೆಯಲು ನಿರ್ಧರಿಸಿದ.

ಬೆಳಗಿನ ಜಾವ...

ಚುಮುಚುಮು ಇಬ್ಬನಿ ಬೀಳುತ್ತಿದ್ದ ಸಮಯದಲ್ಲಿ, ಇಬ್ಬರು ಬಾಲಕರು ನಗುತ್ತಾ, ಹರಟೆ ಹೊಡೆಯುತ್ತಾ ತುಳಸಿ ವೃಂದಾವನದತ್ತ ಬರುತ್ತಿರುವುದು ಕಳ್ಳನಿಗೆ ಕಾಣಿಸಿತು.

ಮರದಿಂದ ಇಳಿದು ಅವರ ಬಳಿಗೆ ಹೋದನು.

ಆ ಬಾಲಕರು ನೋಡಲು ತುಂಬಾ ಮುದ್ದಾಗಿದ್ದರು. ಹರಿದಾಸರು ವರ್ಣಿಸಿದಂತೆಯೇ ಸುಂದರವಾದ ಒಡವೆಗಳನ್ನು ಧರಿಸಿದ್ದರು.

ಅವರನ್ನು ನೋಡಿದ ಕಳ್ಳನ ಮನಸ್ಸಿನಲ್ಲಿ ಮಮತೆ ಮೂಡಿತು.

"ಎಷ್ಟು ಚೆಂದದ ಮಕ್ಕಳು! ಇವುಗಳ ಒಡವೆಗಳನ್ನು ನಾನು ತೆಗೆದುಕೊಂಡರೆ ಆ ಶಿವ ಮೆಚ್ಚಿಯಾನೇ," ಎಂದುಕೊಂಡ.

ಆದರೆ ಒಡವೆಗಳನ್ನು ಕದಿಯುವ ಬದಲು, ಮಕ್ಕಳನ್ನು ಕಣ್ತುಂಬ ನೋಡಿ ಅಲ್ಲಿಂದ ಹೊರಡಲು ಮುಂದಾದ.

ಆಗ ಆ ಬಾಲಕರು ಅವನನ್ನು ಕರೆದು,

"ರಾತ್ರಿಯೆಲ್ಲಾ ನಮಗಾಗಿ ಕಾದಿದ್ದೆಯಲ್ಲಾ. ತಗೋ," ಎಂದು ತಮ್ಮ ಒಡವೆಗಳನ್ನು ಬಿಚ್ಚಿ ಅವನಿಗೆ ಕೊಡಲು ಬಂದರು.

ಕಳ್ಳನಿಗೆ ನಾಚಿಕೆಯಾಯಿತು.

"ಬೇಡ, ನನಗೆ ಯಾವುದೂ ಬೇಡ," ಎಂದನು.

ಆದರೂ ಆ ಬಾಲಕರು ಬಿಡಲಿಲ್ಲ.

ಕಳ್ಳನ ತಲೆಗೆ ಸುತ್ತಿದ್ದ ರುಮಾಲನ್ನು ತೆಗೆದುಕೊಂಡು, ಅದರಲ್ಲಿ ತಮ್ಮ ಎಲ್ಲಾ ಒಡವೆಗಳನ್ನು ಹಾಕಿ ಗಂಟು ಹಾಕಿ ಕೊಟ್ಟರು.

ಕಳ್ಳ ಸಂತೋಷದಿಂದ ಮನೆಗೆ ಮರಳಿದ.

ಹರಿದಾಸರಿಗೆ ಆಶ್ಚರ್ಯ

ಮರುದಿನ ರಾತ್ರಿ ಹರಿದಾಸರು ಹರಿಕಥೆ ಮುಗಿಸಿ ಮನೆಗೆ ಹೊರಟಾಗ ಕಳ್ಳ ಎದುರಾದ.

"ಸ್ವಾಮಿಗಳೇ, ನೀವು ಹೇಳಿದ ಆ ಬಾಲಕರು ನನಗೆ ಸಿಕ್ಕಿದರು," ಎಂದ.

ಹರಿದಾಸರು ಆಶ್ಚರ್ಯದಿಂದ,

"ಏನಂದೆ? ನಲವತ್ತು ವರ್ಷಗಳಿಂದ ಕಾಯುತ್ತಿರುವ ನನಗೇ ಅವರು ಸಿಕ್ಕಿಲ್ಲ. ನಿನ್ನಂಥ ಕಳ್ಳನಿಗೆ ಹೇಗೆ ಸಿಕ್ಕರು?" ಎಂದು ಕೇಳಿದರು.

ಕಳ್ಳ ಉತ್ತರಿಸಿದ:

"ನಾನೇನು ಸುಳ್ಳು ಹೇಳುತ್ತಿಲ್ಲ. ಬೇಕಾದರೆ ನೀವೇ ನೋಡಿ. ಇವೆಲ್ಲಾ ನೀವೇ ಹೇಳಿದ ಒಡವೆಗಳು. ಇದನ್ನು ನನಗೆ ಅವರೇ ಒತ್ತಾಯಿಸಿ ಕೊಟ್ಟರು."

ಒಡವೆಗಳನ್ನು ನೋಡಿದ ಹರಿದಾಸರು ಮೂರ್ಛೆ ತಪ್ಪಿ ಬಿದ್ದರು.

ಸ್ವಲ್ಪ ಸಮಯದ ನಂತರ ಎಚ್ಚರಗೊಂಡು, ಕಳ್ಳನ ಕಾಲು ಹಿಡಿದು,

"ನನಗೂ ಆ ಮಕ್ಕಳನ್ನು ತೋರಿಸು," ಎಂದು ಅಂಗಲಾಚಿದರು.

ಕಳ್ಳ ತಕ್ಷಣ,

"ಏಳಿ ಸ್ವಾಮಿಗಳೇ. ನೀವು ಹೀಗೆಲ್ಲಾ ನನ್ನ ಕಾಲು ಮುಟ್ಟಬಾರದು. ನೀವು ಹೇಳಿದ ಹಾಗೆ ಬೆಳಗಿನ ಜಾವ ಆ ಬಾಲಕರು ಬಂದೇ ಬರುತ್ತಾರೆ. ಈಗ ಮನೆಗೆ ಹೋಗಿ ಮಲಗಿ. ಬೆಳಿಗ್ಗೆ ನಾನೂ ನಿಮ್ಮೊಂದಿಗೆ ಬರುತ್ತೇನೆ," ಎಂದನು.

ನಂಬಿಕೆಯ ಶಕ್ತಿ

ಆ ರಾತ್ರಿ ಹರಿದಾಸರಿಗೆ ನಿದ್ರೆ ಬರಲಿಲ್ಲ.

ಬೆಳಕು ಹರಿಯುವ ಮೊದಲೇ ಕಳ್ಳನೊಂದಿಗೆ ತುಳಸಿ ವೃಂದಾವನದತ್ತ ಓಡಿ ಬಂದರು.

"ಎಲ್ಲಿ ಬಾಲಕರು?" ಎಂದು ಹರಿದಾಸರು ಕಳ್ಳನನ್ನು ಕೇಳಿದರು.

"ಅಲ್ಲೇ ಬರ್ತಿದಾರಲ್ಲ ಸ್ವಾಮಿಗಳೇ, ನೋಡಿ," ಎಂದ ಕಳ್ಳ.

ಹರಿದಾಸರು ಎಷ್ಟು ದೂರ ಕಣ್ಣು ಹಾಯಿಸಿದರೂ ಅವರಿಗೆ ಬಾಲಕರು ಕಾಣಲಿಲ್ಲ.

"ಅಲ್ಲೇ ಎದುರಲ್ಲೇ ಇದ್ದಾರಲ್ಲ ಸ್ವಾಮಿಗಳೇ. ಅದ್ಯಾಕೆ ಹೀಗೆ ಆಡ್ತೀರಿ?" ಎಂದು ಕಳ್ಳ ಕೇಳಿದ.

ಆದರೆ ಹರಿದಾಸರಿಗೆ ಬಾಲಕರು ಕಾಣಲಿಲ್ಲ.

ನಿರಾಶೆಯಿಂದ ಪಕ್ಕದಲ್ಲಿದ್ದ ಬಂಡೆಗೆ ತಲೆ ಚಚ್ಚಿಕೊಳ್ಳುತ್ತಾ ಅವರು ಅಳತೊಡಗಿದರು.

"ನಲವತ್ತು ವರ್ಷಗಳಿಂದ ಹಗಲು ರಾತ್ರಿ ಬಿಡದೇ ನಿನ್ನದೇ ಜಪ ಮಾಡುತ್ತಿರುವ ನನ್ನ ಕಣ್ಣಿಗೆ ಕಾಣಿಸದೆ, ಆ ಕಳ್ಳನಿಗೆ ನೀನು ಕಾಣಿಸುತ್ತಿರುವೆಯಲ್ಲಾ! ಇಷ್ಟು ವರ್ಷಗಳ ಕಾಲ ನಿನ್ನ ಜಪ ಮಾಡಿದ್ದಕ್ಕೆ ನೀನು ಮಾಡಿದ್ದಾದರೂ ಏನು?"

ಎಂದು ಒಂದೇ ಸಮನೆ ಅಳತೊಡಗಿದರು.

ಆಗ ಶ್ರೀಹರಿಯು ಪ್ರತ್ಯಕ್ಷನಾಗಿ ನಗುತ್ತಾ ಹೇಳಿದನು:

"ನೀನು ನಲವತ್ತು ವರ್ಷಗಳಿಂದ ಬರೀ ನನ್ನ ಜಪ ಮಾತ್ರ ಮಾಡಿ, ನನ್ನನ್ನು ಬರೀ ಕಥೆಯೆಂದು ತಿಳಿದೆ."

"ಆದರೆ ಈ ಕಳ್ಳ ನನ್ನನ್ನು ನಿಜವೆಂದು ತಿಳಿದು ನನಗಾಗಿ ಕಾಯುತ್ತಿದ್ದ."

"ನಿನಗೂ ಅವನಿಗೂ ಇರುವ ವ್ಯತ್ಯಾಸ ಇದು."

"ಬರೀ ಭಕ್ತಿ, ಶ್ರದ್ಧೆ ಇದ್ದರೆ ಮಾತ್ರ ಸಾಲದು. ಜೊತೆಯಲ್ಲಿ ನಂಬಿಕೆಯೂ ಇರಬೇಕು."

"ನಂಬಿಕೆ ಇಲ್ಲದೇ ನೀನು ಏನೇ ಮಾಡಿದರೂ ಅವೆಲ್ಲವೂ ವ್ಯರ್ಥವೇ."

ಎಂದು ಹೇಳಿ ಶ್ರೀಹರಿಯು ಅದೃಶ್ಯನಾದನು.

ಜೀವನಕ್ಕೆ ಸಿಗುವ ಪಾಠ

ಈ ಕಥೆ ನಮಗೆ ಒಂದು ಸರಳವಾದ ಆದರೆ ಆಳವಾದ ಸಂದೇಶವನ್ನು ನೀಡುತ್ತದೆ.

ಭಕ್ತಿ ಇದ್ದರೆ ಸಾಕಾಗುವುದಿಲ್ಲ; ನಂಬಿಕೆಯೂ ಇರಬೇಕು.

ನಾವು ಜೀವನದಲ್ಲಿ ಯಾವುದನ್ನಾದರೂ ನಂಬಿಕೆಯಿಂದ ಅನುಸರಿಸಿದಾಗ ಮಾತ್ರ ಅದರ ಅರ್ಥವನ್ನು ಆಳವಾಗಿ ಅನುಭವಿಸಲು ಸಾಧ್ಯ.

ನಂಬಿಕೆ ಎಂದರೆ ಕಣ್ಣುಮುಚ್ಚಿ ಯಾವುದನ್ನಾದರೂ ಒಪ್ಪಿಕೊಳ್ಳುವುದು ಅಲ್ಲ. ನಮ್ಮ ಹೃದಯದಲ್ಲಿ ಇರುವ ಶ್ರದ್ಧೆ, ಸ್ಥಿರತೆ ಮತ್ತು ವಿಶ್ವಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು.

ಭಕ್ತಿ + ಶ್ರದ್ಧೆ + ನಂಬಿಕೆ = ಅಂತರಂಗದ ಶಕ್ತಿ.

ನಮ್ಮ ಜೀವನದಲ್ಲಿಯೂ ಕೆಲವೊಮ್ಮೆ ಫಲ ತಕ್ಷಣ ಕಾಣಿಸದೇ ಇರಬಹುದು. ಆದರೆ ಸರಿಯಾದ ಮಾರ್ಗದಲ್ಲಿ ನಂಬಿಕೆಯಿಂದ ಮುಂದುವರಿಯುವ ಧೈರ್ಯವೇ ನಮ್ಮನ್ನು ಮುಂದೆ ಕೊಂಡೊಯ್ಯುತ್ತದೆ.

ಒಂದು ಕ್ಷಣ ಯೋಚಿಸಿ...

ನಾವು ಪ್ರತಿದಿನ ಮಾಡುವ ಕೆಲಸಗಳಲ್ಲಿ, ಸಂಬಂಧಗಳಲ್ಲಿ ಮತ್ತು ನಮ್ಮ ಜೀವನದ ಗುರಿಗಳಲ್ಲಿ ನಿಜವಾದ ನಂಬಿಕೆ ಇದೆಯೇ?

ಅಥವಾ ನಾವು ಕೇವಲ ಮಾಡಬೇಕೆಂದು ಮಾಡುತ್ತಿದ್ದೇವೆಯೇ?

ನಂಬಿಕೆಯೊಂದಿಗೆ ಮಾಡಿದ ಪ್ರತಿಯೊಂದು ಸಣ್ಣ ಹೆಜ್ಜೆಯೂ ನಮ್ಮ ಜೀವನಕ್ಕೆ ಹೊಸ ಅರ್ಥವನ್ನು ನೀಡಬಹುದು.

ಜೊತೆಯಲ್ಲಿ ನಂಬಿಕೆಯೂ ಇರಬೇಕು.

#ಭಕ್ತಿ#ನಂಬಿಕೆ#ಆಧ್ಯಾತ್ಮಿಕತೆ#ಹರಿಭಕ್ತಿ#ಜೀವನ ಪಾಠ#ಕನ್ನಡ ಕಥೆ#mindful living